Tuesday, November 30, 2010

ಹುಡುಕಾಟ


"ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ...."

ಗೋಪಾಲ ಕೃಷ್ಣ ಅಡಿಗ ಅವರು ಹೇಳಿದ ಮಾತು ಎಷ್ಟೊಂದು ಸುಸೂಕ್ತವಾಗಿದೆ ಅಂದರೆ ನಾವು ನಮ್ಮ ಜೀವನದಲ್ಲಿ ಪ್ರತಿನಿತ್ಯ ಮಾಡುತ್ತಿರುವುದು ಇದನ್ನೇ. ಮಗು ಹುಟ್ಟಿದ ತಕ್ಷಣ ಸಮಯವನ್ನಾದರಿಸಿ ಅದಕ್ಕೆ ಹೆಸರನ್ನ ಹುಡುಕೋದು, ಮಗು ಬೆಳೆಯುತ್ತಾ ಅದರ ಶಿಕ್ಷಣಕ್ಕೆ ಯಾವ ಶಾಲೆಗೆ ಸೇರಿಸಬೇಕು ಅಂತ ಹುಡುಕಾಟ, ಆಮೇಲೆ ಯಾವ ಕಾಲೇಜ್, ಯಾವ ವಿಧ್ಯಾರ್ಥಿ-ನಿಲಯಕ್ಕೆ ಸೇರಿಸೋದು, ಓದು ಮುಗಿದ ಮೇಲೆ ಉದ್ಯೋಗಕ್ಕೆ ಹುಡುಕಾಟ, ಕೆಲಸ ಸಿಕ್ಕ ಮೇಲೆ ಮದುವೆಗೆ ಹುಡುಗಿ ಹುಡುಕೋದು, ಮದುವೆಯಾದ ಮೇಲೆ ಮನೆ ಕಟ್ಟೋಕೆ ೪೦x೩೦ ಜಾಗಕ್ಕೆ ಹುಡುಕಾಟ, ಯಾವ ಕಾರು ತಗೊಳೋದು, ನಂತರ ಮಕ್ಕಳು ಅವರ ವಿಧ್ಯಾಭಾಸ, ಅವರ ಮದುವೆ, ಪೆನ್ಶನ್,.. ಹೀಗೆ ಜೀವನ ಪೂರ್ತಿ ಒಂದಲ್ಲ ಒಂದು ರೀತಿ ಹುಡುಕಾಟಗಳನ್ನ ನಾವು ಬೆನ್ನಿಗೆ ಕಟ್ಟಿಕೊಳ್ತಾ ಹೋಗ್ತಿವಿ. "ಹುಡುಕಾಟ" ಈ ಪದವೆ ಹೇಳುತ್ತೆ ಅದನ್ನ ಅರಸಿಕೊಂಡು ಹೋದರೆ ನಮಗೆ ಕಾಟ ಕಾದಿರುತ್ತೆ ಅಂತ, ಆದರೆ ಅದರ ಅರಿವು ನಮಗೆ ಆಗೋದು ಅನುಭವಿಸಿದಾಗಲೆ. ಹಾಗೆ ಹುಡುಕಾಟ ಯತ್ನದಲ್ಲಿರುವಾಗ ಎಷ್ಟೋ ಸಲ ಮಾನವೀಯ ಮೌಲ್ಯಗಳನ್ನ, ನೈತಿಕಾತೆಯನ್ನ ಗಾಳಿಗೆ ತೂರಿ ಸಾಗ್ತಾರೆ. ಆನ್‌ಸೈಟ್ ಅನ್ನು ಅರಸಿ ಹೋಗು ಬಹುಪಾಲು ಸಾಫ್ಟ್‌ವೇರ್ ಇಂಜಿನಿಯರ್ ಗಳು ವೃದ್ದಾಪ್ಯದಲ್ಲಿರೋ ತಮ್ಮ ತಂದೆ-ತಾಯಿಗಳನ್ನ ಒಂಟಿ ಮಾಡಿ ಹೋಗ್ತಾರೆ, ಇಲ್ಲ ವೃದ್ಧಾಶ್ರಮದಲ್ಲಿ ಸೇರಿಸಿ ಹೋಗ್ತಾರೆ. ಆಗ ತಂದೆ-ತಾಯಿಗಳಿಗೆ ಆಗೋ ನೋವು, ಅವರ ಒಂಟಿತನ ಹಾಗೂ ಬೇಸರ ಇವುಗಳು ಅವರಿಗೆ ಅರ್ಥ ಆಗೋಲ್ಲ. ಮುಂದೆ ಒಂದಲ್ಲ ಒಂದು ದಿನ ತನ್ನ ಮಗ ಇದೆ ರೀತಿ ನಮ್ಮ ಅಪ್ಪ ಅಜ್ಜ-ಅಜ್ಜಿಗೆ ಹೀಗೆ ಮಾಡಿದ್ದ ಅಂತ ಅವರಿಗೂ ಮಾಡಿದ ಮೇಲೆ ಅದರ ಅರಿವು ಆಗುತ್ತೆ. ರಾಜಕಾರಣಿಗಳು ಕೂಡ ಮಂತ್ರಿಗಿರಿಯನ್ನ ಹುಡುಕುತ್ತಾ ಚುನಾವಣೆಗೆ ಮೊದಲು ತಮ್ಮಲ್ಲಿ ಇದ್ದ ಪ್ರಾಮಾಣಿಕತೆ, ನಿಷ್ಟೆಯನ್ನ ಮರೆತು ಭ್ರಷ್ಟಾಚಾರದಲ್ಲಿ ತೊಡಗಿಬಿಡುತ್ತಾರೆ. ವ್ಯಾಪಾರಿ ಲಾಭದ ಹುಡುಕಾಟದಲ್ಲಿ ಕಲಬೆರಕೆ ಮತ್ತು ತೂಕದಲ್ಲಿ ಮೋಸ ಮಾಡೋ ಕೆಲಸಕ್ಕೆ ನಿಂತುಬಿಡುತ್ತಾನೆ.

ಮನುಷ್ಯನ ಮನೋವೃತ್ತಿನೇ ಹಾಗೆ ಇರುದನ್ನ ಬಿಟ್ಟು ಹೊಸತನ್ನು ಹುಡುಕುವುದು. ಕೆಲವು ಹುಡುಕಾಟಗಳು ಹೇಗಿರುತ್ತವೆ ಅಂದರೆ ಅದು ನಿಜವಾಗಿ ನಮಗೆ ಬೇಕೇ ಅಂತ ಯೋಚಿಸೋ ವ್ಯವದಾನ ಇಲ್ಲದೇ ನಡಿತಿರುತ್ತೆ. ವಾರದ ಕೊನೆ ಬಂತು ಅಂದ್ರೆ ಸಾಕು ಕುಡಿತದ ಅಮಲು ಇರೋರು ಬಾರ್-ರೆಸ್ಟೋರೌಂಟ್, ಪಬ್ ಗಳನ್ನ ,ಚಿತ್ರ-ರಸಿಕರು ಫಿಲ್ಮ್ ಥಿಯೇಟರ್ ಗಳನ್ನ, ಪ್ರೇಮಿಗಳು ಪಾರ್ಕ್ ಗಳನ್ನ, ಪ್ರಕೃತಿ-ಪ್ರಿಯರು ತಂಪಾದ ಎತ್ತರದ ಬೆಟ್ಟ ಮೇಲಿನ ಜಾಗಗಳನ್ನ , ತಿಂಡಿ-ಪೋತರು ಒಳ್ಳೇ ಹೋಟೆಲ್ ಗಳನ್ನ, ಮನೆಯಲ್ಲಿ ಸಿಗೋ ಒಳ್ಳೇ ಊಟ ಬಿಟ್ಟು ರಸ್ತೆಬದಿಯಲ್ಲಿ ಸಿಗೋ ಪಾನಿ-ಪುರಿ ಹುಡುಕಿಕೊಂಡು ಹೋಗೋದು, ಹೀಗೆ ಹುಡುಕಾಟ, ಹುಡುಕಾಟ... ಮನುಷ್ಯ ಗುಣ ಹೇಗೆ ಅಂದರೆ ಒಂದು ವಸ್ತು ಅಥ್ವಾ ವಿಷಯವನ್ನ ಗ್ರಹಿಸಿ ಅದರ ಅನುಭವ ದೊರೆತ ಮೇಲೆ ಅದರ ಮೇಲಿನ ವ್ಯಾಮೋಹ ಕಡಿಮೆ ಆಗುತ್ತೆ ಅಲ್ಲೀವರೆಗೂ ಈ ಹುಡುಕಾಟ ನಡಿತಾನೆ ಇರುತ್ತೆ.

ಒಂದು ರೀತಿಯಲ್ಲಿ ಈ ಹುಡುಕಾಟಗಳಿಂದಲೇ ಸಾಕಷ್ಟು ಸಂಶೋಧನೆಗಳು ಮತ್ತು ಆವಿಷ್ಕಾರಗಳು ನಡೆದಿರೊದು. ವಸ್ಕೊಡಿಗಾಮ ಆ ರೀತಿ ಹುಡುಕಿದ್ದರಿಂದ ಬ್ರಿಟಿಷರಿಗೆ ಭಾರತ ಅಂತ ಒಂದು ದೇಶ ಇದೆ ಅಂತ ಗೊತ್ತಾಗಿದ್ದು, ಆಮೇಲೆ ಅವರು ನಮ್ಮನ್ನ ೩೦೦ ವರ್ಷಗಳ ಕಾಲ ಅಳಿದ್ದು. ಮರದ ಕೆಳಗೆ ಮಲಗಿದ್ದ ನ್ಯುಟನ್ಗೆ ಮರದಿಂದ ಬಿದ್ದ ಸೆಬಿನ ಹಿಂದಿನ ರಹಿಸ್ಯ ಅರಿಯಲು ಹೋದಾಗ ಗುರುತ್ವಾಕರ್ಷಣೆ ಶಕ್ತಿ ಬೆಳಕಿಗೆ ಬಂದದ್ದು. ಹೀಗೆ ಮನುಷ್ಯ ಬುಧ್ಧಿಜೀವಿ ಆಗಿರೋದರಿಂದ ತನ್ನ ಜೀವನ ಅತಿ ಸುಲಭ ಹಾಗೂ ನಿರಾಯಾಸದಾಯಕ ಆಗಲು ಏನೇನು ಬೇಕು ಎಲ್ಲವನ್ನು ಹುಡುಕಿ ಕಂಡುಕೊಂಡಿದ್ದಾನೆ. ಹುಡುಕಾಟಕ್ಕೆ ಮತ್ತೊಂದು ನಿದರ್ಶನ ಅಂದರೆ "google search" ಯಾವುದೇ ವಿಷಯಗಳನ್ನೇ ಆಗಲಿ ಅಂತರ್ಜಾಲದಲ್ಲಿ ಜಾಲಾಡಿ ಕೇವಲೇ ಮಿಲಿಸೆಕಂಡ್ ಅಲ್ಲಿ ಹುಡುಕಿ ಕೊಡುತ್ತೆ. ಇದು ಇಷ್ಟೊಂದು ಪ್ರಸದ್ಧಿ ಪಡೆದಿರುವುದು ಅದರ ವೇಗದ ಕಾರ್ಯನಿರ್ವಹನೆ ಇಂದ.

ನಾವು ಏನನ್ನಾದರೂ ಹುಡುಕುವ ಮೊದಲು ಅದರ ಅಗತ್ಯತೆ ಅರಿಯಬೇಕು. ನಂತರ ಅದಕ್ಕೆ ಬೇಕಾದ ಸಿಧ್ಧತೆ ಮಾಡಿಕೊಳ್ಳಬೇಕು. ನಾವು ನಮ್ಮ ಜೀವನದಲ್ಲಿ ಹುಡುಕಾಟದ ಯಾತ್ರೆಯಲ್ಲಿ ನಮಗೆ ಬೇಕಾದದ್ದು ನಮ್ಮ ಪ್ರಾಮಾಣಿಕ ಪ್ರಯತ್ನ, ತಾಳ್ಮೆ ಮತ್ತು ಅದೃಷ್ಟ. ದಾಸರು, ಸಂತರು, ದಾರ್ಶನಿಕರು ಧರ್ಮವನ್ನು ಅನುಸರಿಸಿ ಪರಮಸತ್ಯದ ಅನ್ವೇಷಣೆ ಮಾಡಹೊರಟು ಮೋಕ್ಷವನ್ನು ಪಡೆದುಕೊಂಡಿದ್ದಾರೆ. ನಾವುಗಳು ಅಸತ್ಯದಿಂದ ಸತ್ಯಡೆಗೆ, ಹಿಂಸೆ ಇಂದ ಅಹಿಂಸೆ ಕಡೆಗೆ, ಅಶಾಂತಿ ಇಂದ ಶಾಂತಿಯೆಡೆಗೆ, ಕತ್ತಲಿಂದ ಬೆಳಕಿನ ಕಡೆಗೆ ಸಾಗೊಣ ಅಂತ ಹೇಳುತ್ತ ಈ ಪುಟ್ಟ ಬರಹಕ್ಕೆ ವಿರಾಮ ಹಾಕ್ತೀನಿ.

ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ ।
ಚಿನ್ನದಾತುರಕಿಂತ ಹೆಣ್ಣುಗಂಡೊಲವು ।।
ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ ।
ತಿನ್ನುವುದದಾತ್ಮವನೆ ಮಂಕುತಿಮ್ಮ ।।


ಇಂತಿ
ರಾಮಕೃಷ್ಣ ಎಸ್.

3 comments:

  1. ಚೆನ್ನಾಗಿದೆ ಹುಡು-"ಕಾಟ".................
    ಮುಂದುವರೆಸು .............

    ReplyDelete
  2. ಚೆನ್ನಾಗಿದೆ ಹುಡು-"ಕಾಟ".................
    ಮುಂದುವರೆಸು .............

    ReplyDelete
  3. Krish this one sooper,,,,,,good work and nice search !!!!!! Keep up the good work :) waiting for new one !!!!

    ReplyDelete